ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಲ್ಯಾಣಿ ಸ್ವಚ್ಚತೆ


ನಾವು ವಾಸಿಸುವ ಪರಿಸರವು ಭೂಮಿಯ ಮೇಲಿನ ಎಲ್ಲಾ ಜೀವ ರೂಪಗಳನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಅದನ್ನು ರಕ್ಷಿಸುವುದು ಮತ್ತು ನಿರ್ವಹಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಹಮದ್ ರೋಷನ್ ಷಾ ತಿಳಿಸಿದರು.ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ ಮತ್ತು ಮೆಸರ್ಸ್ ಟೈಟಾನ್ ಕಂಪನಿ ಲಿ, ಶಾಂತಿನಿಕೇತನ್ ಪದವಿ ಪೂರ್ವಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯಲ್ಲಿರುವ ಬ್ರಾಹ್ಮಣರ ಸಂಘ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ವಿ. ಶಿವಪ್ರಸಾದ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾನೂನು ಸೇವೆಗಳ ಪ್ರಾದಿಕಾರ ಕಾರ್ಯದರ್ಶಿ ಮಹಮದ್ ರೋಷನ್ ಷಾ ಮಾತನಾಡಿ ನಾವು ಮಾಡಬಹುದಾದ ಪ್ರತಿಯೊಂದು ಸಣ್ಣ ಬದಲಾವಣೆಯನ್ನು ಮಾಡಲು ನಾವು ಒಟ್ಟಾಗಿ ನಿಲ್ಲುತ್ತೇವೆ. ನಮ್ಮ ಜಗತ್ತನ್ನು ನಮಗೆ ಮತ್ತು ಭವಿಷ್ಯದ ಪೀಳಿಗೆಗೆ ಅದ್ಭುತ ಸ್ಥಳವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡೋಣ. ಇರುವುದು ‘ಒಂದೇ ಭೂಮಿ’ ಆ ಭೂಮಿಯನ್ನು ಉಳಿಸೋಣ. ನಮ್ಮ ಹಿರಿಯರು ನಮಗೆ ನೀಡಿರುವ ನೀರಿನ ಮೂಲಗಳಾದ ಕೆರೆ,ಕುಂಟೆ, ಬಾವಿ,ಕಲ್ಯಾಣಿ ಗಳನ್ನು ನಾವು ಉಪಯೋಗಿಸದೆ ಅವು ಪಾಳು ಬಿದ್ದಿವೆ. ಅವುಗಳನ್ನು ಸ್ವಚ್ಚಗೊಳಿಸಿ, ಪುನಃಚೇನತಗೊಳಿಸ ಬೇಕಾಗಿರುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ವೇಳೆ ೧ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ , ಜಿಲ್ಲಾ ಪರಿಸರ ಅಧಿಕಾರಿ ಟಿ.ಎಮ್.ಸಿದ್ದೇಶ್ವರಬಾಬು, ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್, ನಗರಸಭೆ ಪೌರಾಯುಕ್ತ ಮಂಜುನಾಥ್, ಪರಿಸರ ಅಭಿಯಂತರ ಉಮಾಶಂಕರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮುರಳಿಮೋಹನ್, ಮತ್ತಿತರರು ಇದ್ದರು.

ದೇಶ