ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವು


ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಅಬ್ಲೂಡು ಗ್ರಾಮ ಪಂಚಾಯಿತಿ ಕೆಂಪನಹಳ್ಳಿಯಲ್ಲಿ ಮಂಗಳವಾರ ಊರ ಜಾತ್ರೆ ನಡೆದಿದ್ದು ಊರ ಜಾತ್ರೆಯಲ್ಲಿ ಒಂದು ಕಡೆ ಸೇರಿದ್ದ ಇಬ್ಬರು ಸಹಪಾಠಿಗಳು ಕೃಷಿಹೊಂಡದಲ್ಲಿ ಈಜಲು ಹೋಗಿದ್ದು ಮೇಲೆ ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆಂಪನಹಳ್ಳಿಯ ೧೫ ವರ್ಷದ ನಿತಿನ್ ಕುಮಾರ್ ಮತ್ತು
ಚಿಕ್ಕಬಳ್ಳಾಪುರ ತಾಲೂಕು ಅಂಗರೇಕನಹಳ್ಳಿಯ ೧೬ ವರ್ಷದ ಮಂಜುನಾಥ್ ಮೃತಪಟ್ಟ ದುರ್ಧೈವಿಗಳು. ನಿತಿನ್ ಕುಮಾರ್ ಮತ್ತು ಮಂಜುನಾಥ್ ಇಬ್ಬರೂ ಸಹ ಶಿಡ್ಲಘಟ್ಟ ನಗರದ ಶಾರದಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯ ಸಹಪಾಠಿಗಳಾಗಿದ್ದು ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾದಿದ್ದರು. ಕೆಂಪನಹಳ್ಳಿಯಲ್ಲಿ ಊರ ಜಾತ್ರೆಯಿದ್ದ ಕಾರಣ ನಿತಿನ್ ಕುಮಾರ್ ಮನೆಗೆ
ಮಂಜುನಾಥ್ ಆಗಮಿಸಿದ್ದು ಜಾತ್ರೆಯ ಮಾಂಸಾಹಾರದ ಊಟದ ನಂತರ ಈಜಲೆಂದು
ಸಮೀಪದಲ್ಲೇ ಇದ್ದ ಕೃಷಿಹೊಂಡಕ್ಕೆ ಇಳಿದಿದ್ದಾರೆ. ಆದರೆ ನಿತಿನ್ ಕುಮಾರ್ ಮತ್ತು ಮಂಜುನಾಥ್ ನೀರಿನಿಂದ ಮೇಲೆ ಬಾರದೆ ಮುಳುಗಿದ್ದಾರೆ. ಅವರಿಬ್ಬರ ಜತೆಗೆ ಹೋಗಿದ್ದ ಹೊಸಹುಡ್ಯದ ಮುನೀಂದ್ರ ಎಂಬಾತ ಈ ವಿಷಯವನ್ನು ಅವರ ಮನೆಯಲ್ಲಿ ತಿಳಿಸಿದ್ದು ಕೂಡಲೆ ಕುಟುಂಬದವರು ದೌಡಾಯಿಸಿದ್ದಾರೆ.
ಆದರೆ ನೀರಲ್ಲಿ ಇಳಿದು ಅವರನ್ನು ಪತ್ತೆ ಮಾಡುವಷ್ಟರಲ್ಲಿ ಅವರಿಬ್ಬರ ಉಸಿರು
ನಿಂತು ಹೋಗಿದೆ. ಶಿಡ್ಲಘಟ್ಟದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಶಿಡ್ಲಘಟ್ಟ
ಗ್ರಾಮಾಂತರ ಠಾಣೆಯ ಎಸ್‌ಐ ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು ದೂರು
ದಾಖಲಿಸಿಕೊಂಡಿದ್ದಾರೆ.

ಆರೋಗ್ಯ ಕ್ರೈಂ ನಮ್ಮ ಚಿಕ್ಕಬಳ್ಳಾಪುರ ರಾಜ್ಯ ಸುದ್ದಿ