ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಮುಂದುವರೆದ ಬಣ ರಾಜಕೀಯ, ಹೈಕಮಾಂಡ್‌ಗೂ ಜಗ್ಗದ ರಾಜೀವ್‌ಗೌಡ


ಶಿಡ್ಲಘಟ್ಟದ ಕಾಂಗ್ರೆಸ್ ಪಾಲಿಗೆ ಸಧ್ಯಕ್ಕೆ ರಾಜೀವ್‌ಗೌಡರೆ ನಾಯಕರು. ಇದೀಗ ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಇಬ್ಬರೂ ನಾಯಕರನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆಯಾದರೂ ಸಧ್ಯಕ್ಕೆ ಇಬ್ಬರೂ ನಾಯಕರನ್ನು ಒಗ್ಗೂಡಿಸುವ ಯತ್ನ ಸಫಲವಾಗಿಲ್ಲ. ಹಾಗಾಗಿ ಬಣ ರಾಜಕೀಯ ಮುಂದುವರೆದಿದೆ.ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪಾಲಿಗೆ ಕಳೆದ ನಾಲ್ಕು ದಶಕಗಳಿಂದಲೂ ಹೈ ಕಮಾಂಡ್‌ನಂತಿದ್ದ ಮಾಜಿ ಸಚಿವ ವಿ.ಮುನಿಯಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ರಾಜೀವ್‌ಗೌಡರಿಗೆ ಕಾಂಗ್ರೆಸ್‌ನಿಂದ ಬಿ ಫಾರಂ ದೊರೆತಿತ್ತು. ಕೈ ಟಿಕೇಟ್ ತಪ್ಪಿದ್ದರಿಂದ ಪುಟ್ಟು ಆಂಜಿನಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ೫೨ ಸಾವಿರ ಮತಗಳನ್ನು ಪಡೆದು ಪರಾಭವಗೊಂಡರಾದರೂ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರಾಜೀವ್‌ಗೌಡರ ಸೋಲಿಗೂ ಕಾರಣರಾದರು. ಈ ಕಾರಣಕ್ಕಾಗಿಯೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅರೋಪ ಹೊತ್ತು ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದರು.ಅಂದಿನಿಂದ ಇಂದಿನವರೆಗೂ ಶಿಡ್ಲಘಟ್ಟದ ಕಾಂಗ್ರೆಸ್ ಪಾಲಿಗೆ ರಾಜೀವ್‌ಗೌಡರೆ ನಾಯಕರು. ಆದರೆ ಇದೀಗ ಮತ್ತೆ ಪುಟ್ಟು ಆಂಜಿನಪ್ಪ ಅವರು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಿದ್ದಾರೆ.ಇವರಿಬ್ಬರ ನಡುವೆ ಶಿಡ್ಲಘಟ್ಟದ ಕಾಂಗ್ರೆಸ್‌ನ ಅಧಿಪತ್ಯ ಹಿಡಿಯುವ ಸರ್ಕಸ್ಸು ಶುರುವಾಗಿದ್ದು, ಬಣ ರಾಜಕೀಯ ಆರಂಭವಾಗಿದೆ. ಕಾಂಗ್ರೆಸ್‌ನ ಹೈ ಕಮಾಂಡ್ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನವನ್ನು ನೀಡಿ ಆ ಮೂಲಕ ಇಬ್ಬರೂ ನಾಯಕರನ್ನು ಒಗ್ಗೂಡಿಸಲು ಚಿಂತನೆ ನಡೆಸಿ ಇಬ್ಬರನ್ನೂ ಒಗ್ಗೂಡಿಸುವ ಹೊಣೆಯನ್ನು ವಿ.ಮುನಿಯಪ್ಪ ಅವರಿಗೆ ನೀಡಿದೆ. ರಾಜೀವ್‌ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರನ್ನು ಒಗ್ಗೂಡಿಸಲು ಶಿಡ್ಲಘಟ್ಟ
ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ಏಪ್ರಿಲ್ ೧೨ರಂದು ಶುಕ್ರವಾರ ಸಭೆ ಕರೆಯಲಾಗಿದೆ. ರಾಜೀವ್‌ಗೌಡ ಮತ್ತು ಪುಟ್ಟು ಆಂಜಿನಪ್ಪ ಇಬ್ಬರೂ ನಾಯಕರು ಹಾಗೂ ಅವರ ಬೆಂಬಲಿಗರನ್ನು ಸಭೆಗೆ ಕರೆಯುವ ಪ್ರಯತ್ನವನ್ನು ವಿ.ಮುನಿಯಪ್ಪ ಮತ್ತು ಅವರ ಪುತ್ರ ಶಶಿಧರ್‌ಮುನಿಯಪ್ಪ ಮಾಡಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪರವಾಗಿ ಮತ ಕೇಳದ ವಿ.ಮುನಿಯಪ್ಪ ಹಾಗೂ ಅವರ ಪುತ್ರ ಆಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಶಿಧರ್ ಮುನಿಯಪ್ಪ ಅವರ ವಿರುದ್ದ ಮುನಿಸಿಕೊಂಡಿರುವ ರಾಜೀವ್‌ಗೌಡರು ಇದೀಗ ಮುನಿಯಪ್ಪ ಮತ್ತು ಶಶಿಧರ್ ಅವರ ಕರೆ ಸ್ವೀಕರಿಸುತ್ತಿಲ್ಲ, ಅವರ ಭೇಟಿಗೂ ಸಿಗುತ್ತಿಲ್ಲ. ಆದ್ದರಿಂದ ಏಪ್ರಿಲ್ ೧೨ರಂದು ನಡೆಯುವ ಒಂದುಗೂಡಿಸುವ ಸಭೆಗೆ ರಾಜೀವ್‌ಗೌಡ ಮತ್ತು ಅವರ ಬೆಂಬಲಿಗರು ಬರುವುದು ಡೌಟಾಗಿದೆ. ಈ ಮದ್ಯೆ ಇಬ್ಬರೂ ನಾಯಕರನ್ನು ಒಂದುಗೂಡಿಸುವ ಏಪ್ರಿಲ್ ೧೨ರ ಶುಕ್ರವಾರದ ಸಭೆಗೆ ಅನುಮತಿ ಕೋರಿ ಚುನಾವಣಾ ಅಧಿಕಾರಿಗೆ ಪುಟ್ಟು ಆಂಜಿನಪ್ಪ ಅವರು ಪತ್ರ ಬರೆದಿದ್ದಾರೆ.
ಅನುಮತಿ ನೀಡದಂತೆ ರಾಜೀವ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ, ಕೃಷ್ಣಾರೆಡ್ಡಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಚುನಾವಣಾ ಆಯೋಗವು ಸಭೆಗೆ ಅನುಮತಿ ನೀಡಿಲ್ಲ. ಇದರಿಂದ ಎಚ್ಚೆತ್ತ ವಿ.ಮುನಿಯಪ್ಪ ಅವರು ದಿಡೀರ್ ಎಂದು ಸಭೆ ಬದಲಿಗೆ ಅಭಿನಂದನಾ ಸಭೆ ನಡೆಸಲು ಅನುಮತಿ ಕೋರಿ ಅನುಮತಿ ಪಡೆದಿದ್ದು ಇದೀಗ ಇಬ್ಬರೂ ನಾಯಕರನ್ನ ಒಗ್ಗೂಡಿಸುವ ಬದಲಿಗೆ ಅಭಿನಂದನಾ ಸಮಾರಂಭ ನಡೆಸಲಿದ್ದು ಈ ಸಭೆಗೆ ರಾಜೀವ್‌ಗೌಡ ಮತ್ತು ಅವರ ಬೆಂಬಲಿಗರು ಹಾಜರಾಗುತ್ತಾರಾ ಇಲ್ಲವಾ ಕಾದು ನೋಡಬೇಕಿದೆ.

Breaking news ದೇಶ ರಾಜಕೀಯ