ಚುನಾವಣಾ ವೆಚ್ಚಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲು ವೆಚ್ಚ ವೀಕ್ಷಕರಾದ ದೆಬಾಶಿಶ್ ಮಜುಮ್ ದಾರ್ ಸೂಚನೆ

ಚಿಕ್ಕಬಳ್ಳಾಪುರ,ಮಾರ್ಚ್29: ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ವೆಚ್ಚಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಿ ಸೂಕ್ತ ಸಮಯಕ್ಕೆ ವರದಿ ನೀಡುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕ ದೆಬಾಶಿಶ್ ಮಜುಮ್ ದಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಚುನಾವಣೆ ಸಂಬಂಧ ಇಂದು ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಕೋನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು.ದಾಖಲೆ ಇಲ್ಲದೆ ವಶಪಡಿಸಿಕೊಂಡ ನಗದು ಹಾಗೂ ಇತರೆ ವಸ್ತುಗಳ ಬಗ್ಗೆ ಪ್ರತಿದಿನ ವರದಿ ನೀಡಿ. ಅಕ್ರಮ ಮದ್ಯ, ನಗದು ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟು ನಿಗ್ರಹಿಸ ಬೇಕು.ಸುದ್ದಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತು,ಪೇಯ್ಡ್ ನ್ಯೂಸ್ ಮೇಲೆ ನಿಗಾ ಇಡಬೇಕು. ಸಾರ್ವಜನಿಕ ಸಭೆ ಸಮಾರಂಭಗಳು ಅನುಮತಿ ಪ್ರಕಾರ ನಡೆಯಬೇಕು. ಈ ಬಗ್ಗೆ ಹೆಚ್ಚಿನ ನಿಗಾ ಇಡಲು ಸಂಬಂಧ ಪಟ್ಟ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಅಧಿಕಾರಿಗಳು ಶಾಡೋ ರಿಜಿಸ್ಟರ್ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ,ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಗಳಿಗೂ ದಾಖಲಾತಿ ಇಡಬೇಕು. ಪ್ರತಿದಿನ ಚುನಾವಣೆ ವೆಚ್ಚದ ವರದಿ ನೀಡಬೇಕು ಎಂದು ವೆಚ್ಚ ವೀಕ್ಷಕರು ನಿರ್ದೇಶನ ನೀಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗೊಂಡಿರುವ ಚುನಾವಣೆ ಸಿದ್ಧತೆಗಳನ್ನು ಚುನಾವಣಾ ವೆಚ್ಚ ವೀಕ್ಷಕರು ಶ್ಲಾಘಿಸಿದರು.
ಸಾರ್ವಜನಿಕರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಧಿಕೃತ ವೆಚ್ಚಗಳು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ನನ್ನ ದೂರವಾಣಿ ಸಂಖ್ಯೆ 9481911030 ಗೆ ಕರೆ ಮಾಡಿ ತಿಳಿಸಬಹುದು ಅಥವಾ ನಾನು ವಾಸ್ತವ್ಯ ಹೂಡಿರುವ ನಗರದ ಹೊರವಲಯದಲ್ಲಿರುವ ಚದಲಪುರ ಪರಿವೀಕ್ಷಣಾ ಮಂದಿರದ ಕೊಠಡಿ ಸಂಖ್ಯೆ:2 ಕ್ಕೆ ಖುದ್ದಾಗಿ ಸಂಪರ್ಕ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸಭೆಯ ನಂತರ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ತೆರೆದಿರುವ ಮಾಧ್ಯಮ ದೃಡೀಕರಣ ಮತ್ತು ಮೇಲುಸ್ತುವಾರಿ ಸಮಿತಿ ಕಚೇರಿಗೆ ಭೇಟಿ ನೀಡಿದ ವೆಚ್ಚ ವೀಕ್ಷಕರು ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಸಹಾಯಕ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಕ್ಷೇತ್ರದ ಚುನಾವಣಾ ಸಿದ್ದತೆಗಳ ಕುರಿತು ppt ಮೂಲಕ ವಿವರಿಸಿದರು.ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೆಸ್ವಾಮಿ ಸೇರಿದಂತೆ ಇತರೆ ಸಹಾಯಕ ಚುನಾವಣಾ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು, ಚುನಾವಣಾ ಸಂಬಂಧಿ ನಿಯೋಜನೆ ಆಗಿರುವ ವೆಚ್ಚ ಅಧಿಕಾರಿಗಳು,ಇತರೆ ನೋಡಲ್ ಅಧಿಕಾರಿಗಳು ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ದೇಶ ನಮ್ಮ ಚಿಕ್ಕಬಳ್ಳಾಪುರ