ಕೆಎಚ್ ಮುನಿಯಪ್ಪಗೆ ಅಥವಾ ಮಾದಿಗ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ

ಚಿಂತಾಮಣಿ:ಮಾದಿಗ ಸಮುದಾಯ ರಾಷ್ಟ್ರೀಯ ನಾಯಕರಾಗಿರುವ ಕೆ.ಎಚ್‌.ಮುನಿಯಪ್ಪ ರವರನ್ನು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಬೇಕು ಅಥವಾ ಮಾದಿಗ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಸರ್ಕಾರ ಟಿಕೆಟ್ ಘೋಷಣೆ ಮಾಡಬೇಕು ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಜಾಗೃತಿ ಹೋರಾಟ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ ವಿ ರಾಮಪ್ಪ ರವರು ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು. ನಗರದ ಚೇಳೂರು ರಸ್ತೆಯಲ್ಲಿರುವ ದಿವಗಂತ ಪಿವಿ ವೆಂಕಟರವಣಪ್ಪ ರವರ ನಿವಾಸದಲ್ಲಿಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟರಲ್ಲಿ ಎಡಗೈ,ಬಲಗೈಯೆಂಬ ಬೇಧವಿಲ್ಲ.ಆದರೆ ಇತ್ತೀಚಿಗೆ ಕೆಲ ಕಾಂಗ್ರೆಸ್ಸಿಗರು ತಮ್ಮ ಹಿತಾಸಕ್ತಿಗಾಗಿ ಎಡ,ಬಲ ಎಂಬ ತಾರತಮ್ಯ ಸೃಷ್ಟಿಸಿ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ.ಪಕ್ಷದ ವರಿಷ್ಠರು ಯಾವುದೇ ಕಾರಣಕ್ಕೂ ಅಂತಹವರಿಗೆ ಮಣಿಯಬಾರದು ಎಂದು ನುಡಿದರು.

ಕೋಲಾರ ಕ್ಷೇತ್ರದಲ್ಲಿ7ಬಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಕೆ.ಎಚ್.ಮುನಿಯಪ್ಪ ಅವರು,ಕೆಲವರ ಪಿತೂರಿಯಿಂದಾಗಿ ಸೋಲಬೇಕಾಯಿತು.ನಂತರ ಪಕ್ಷದ ವರಷ್ಠರು ತಿಳಿಸಿದಂತೆ ರಾಜ್ಯ ರಾಜಕಾರಣಕ್ಕೆ ಬಂದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಅಲ್ಲದೆ ಕಾಂಗ್ರೆಸ್‌ನ ಮತಗಳಿಕೆಯ ಪ್ರಮಾಣವೂ ಹೆಚ್ಚಾಗಿದೆ ಎಂದರು.ಕೋಲಾರ ಕ್ಷೇತ್ರದ ಪ್ರತಿಯೊಂದು ಬೂತ್‌ನ ಅರಿವನ್ನು ಹೊಂದಿರುವ ಕೆ.ಎಚ್.ಮುನಿಯಪ್ಪ ಟಿಕೆಟ್ ಘೋಷಣೆ ಮಾಡಬೇಕು.ಅಲ್ಲದೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡುವ ನಾಯಕರು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದರು. ಪರಿಶಿಷ್ಟರಲ್ಲಿ ಒಡೆಯುವ ಉದ್ದೇಶದಿಂದಲೇ ಕೆಲ ರಾಜಕಾರಣಿಗಳು ಟಿಕೆಟ್ ಘೋಷಣೆ ಮಾಡುವ ಸಂದರ್ಭದಲ್ಲಿ ಎಡ ಬಲ ಎಂಬ ಬೇದ ಮಾಡುತ್ತಿದ್ದಾರೆ.ತಮ್ಮ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದ ಕೆ.ಹೆಚ್.ಮುನಿಯಪ್ಪ ರವರನ್ನು ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮೀಸಲುಕ್ಷೇತ್ರದಲ್ಲಿ ಇಲ್ಲದ ಕಗ್ಗಂಟು ಕೋಲಾರ ಕ್ಷೇತ್ರದಲ್ಲಿ ಮಾತ್ರ ಹುಟ್ಟುಹಾಕುತ್ತಿದ್ದು, ನೊಂದಸಮುದಾಯಕ್ಕೆ ನೀಡಬೇಕು.ಕೋಲಾರದಲ್ಲಿ ಮಾತ್ರ ತಾರತಮ್ಯ ಮಾಡುವುದು ಸರಿಯಲ್ಲ.ಕೆ.ಎಚ್ ಮುನಿಯಪ್ಪ ರವರನ್ನು ಟಿಕೆಟ್ ನೀಡಬೇಕು.ಟಿಕೆಟ್ ವಂಚನೆ ಮಾಡಿದರೆ ಸಮುದಾಯವು ಸಿಡಿದೇಳುವುದೆಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಪಿಎಂ ನರಸಿಂಹಯ್ಯ,ಜಿಲ್ಲಾ ಕಾರ್ಯದರ್ಶಿ ಪಿ ವಿ ಮಂಜುನಾಥ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಡಿಕೆರೆ ಎಂ ಎನ್ ನಾರಾಯಣಸ್ವಾಮಿ,ತಾಲೂಕು ಅಧ್ಯಕ್ಷರಾದ ಎ ಎಂ ಶ್ರೀನಿವಾಸ,ಗೌರವಾಧ್ಯಕ್ಷರಾದ ಸೂರಪ್ಪಲ್ಲಿ ಕೃಷ್ಣಪ್ಪ,ಕೆ ನಾರಾಯಣಸ್ವಾಮಿ,ನರಸಿಂಹಪ್ಪ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಲ್ಲೂಕು ಸುದ್ದಿ