ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ನಂದಿ ಗ್ರಾಮದ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯ

ನಂದಿ ಗಿರಿಧಾಮದ ಸಾಲು, ದೇವಾಲಯ ಬಹುಪಾಲು:ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ನಂದಿ ಗ್ರಾಮದ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯ, ವಿಶ್ವ ಪ್ರಖ್ಯಾತಿ ನಂದಿ ಬೆಟ್ಟದ ಯೋಗನಂದೀಶ್ವರ ದೇವಾಲಯ, ಗೋಪಿನಾಥ ಬೆಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯ, ಪಾಪಾಘ್ನಿ ಮಠದ ಕಾಲಜ್ಞಾನಿ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿ ದೇವಾಲಯ, ಹನುಮಂತಪುರ ಸಮೀಪದ ಜಾಲಾರಿ ನರಸಿಂಹಸ್ವಾಮಿ ದೇವಾಲಯ ಸೇರಿದಂತೆ ಹತ್ತಾರು ದೇವಾಲಯಗಳು ಭಕ್ತರು, ಪ್ರವಾಸಿಗರ ಆಕರ್ಷಕ ಕೇಂದ್ರಗಳಾಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ಈ ಎಲ್ಲ ಪುರತಾನ ದೇವಾಲಯಗಳಲ್ಲಿ ವಿಶೇಷ ದಿನಗಳಲ್ಲಿ ಧಾರ್ಮಿಕ ಕೈಕಂರ್ಯಗಳು ಅದ್ಧೂರಿಯಾಗಿ ಜರುಗಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣ ಮತ್ತು ಪ್ರವಾಸಿಗರು ಆಗಮಿಸುತ್ತಾರೆ.

ದೇವಾಲಯಗಳ ಕಿರು ಪರಿಚಯ: ಭೋಗ ನಂದೀಶ್ವರ ದೇವಾಲಯ: ನಂದಿ ಗ್ರಾಮದ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯ ಅದ್ಭುತವಾದ ವಾಸ್ತು ಶಿಲ್ಪ, ಕ್ರಿ.ಶ 9 ರಿಂದ 15 ನೇ ಶತಮಾನದ ಒಂದು ಉತ್ತಮ ದ್ರಾವಿಡ ಶೈಲಿಯ ವಾಸ್ತು ಪ್ರಕಾರವಾಗಿದೆ.ವಿಶೇಷವಾಗಿ ನಂದಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಪುರಾತನ ಕಾಲದ ಈ ನಂದಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಭೋಗ ನಂದೀಶ್ವರ, ಅರುಣಾಚಲೇಶ್ವರ, ಈ ಎರಡು ಮಧ್ಯೆದ ಗುಡಿಯಲ್ಲಿ ಉಮಾಮಹೇಶ್ವರ, ಕಮಠೇಶ್ವರ, ಅಪಿತ ಕುಚಲಾಂಬದೇವಿ ಮತ್ತು ಗಿರಿಜಾ ಮಾತೆಯ ದರ್ಶನ ಪಡೆಯುತ್ತಾರೆ.
ನಂಬಿಕೆಗೆ ಪಾತ್ರ: ಅರುಣಾಚಲೇಶ್ವರ ಮತ್ತು ಭೋಗ ನಂದೀಶ್ವರ ಶಿವನ ಬಾಲ್ಯ ಮತ್ತು ಯೌವನದ ಸಂಕೇತವಾಗಿದೆ. ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಸಹ ಇದೆ. ಇಲ್ಲಿನ ವಿಶೇಷತೆ: ಈ ದೇವಾಲಯ 112.8 ಮೀ ಉದ್ದ, ಮತ್ತು 76.2 ಮೀ ಅಗಲದ ಪ್ರಕಾರದಲ್ಲಿರುವ ಜೋಡಿ ದೇವಾಲಯಗಳಲ್ಲಿ ಒಂದಾಗಿದೆ. ಉತ್ತರದಲ್ಲಿ ಭೋಗನಂದೀಶ್ವರ ಮತ್ತು ದಕ್ಷಿಣದಲ್ಲಿ ಅರುಣಾಚಲೇಶ್ವರ ದೇವಸ್ಥಾನಗಳಿವೆ. ಎರಡು ದೇವಾಲಯಗಳ ಮಧ್ಯದಲ್ಲಿ ಉಮಾಮಹೇಶ್ವರನಿಗೆ ಅರ್ಪಿಸಲಾಗಿದೆ. ಇದೇ ಪ್ರಕಾರದಲ್ಲಿ ಅಪಿತ ಕುಚಲಾಂಬದೇವಿ ಮತ್ತು ಗಿರಿಜಾ ದೇವಿ ಎರಡು ದೇವಿಯ ದೇವಸ್ಥಾನಗಳಿವೆ. 2 ಮಹಾದ್ವಾರಗಳು, ವಸಂತ ಮಂಟಪ, ತುಲಾ ಭಾರ ಮಂಟಪಗಳಿವೆ. ಇದೇ ಪ್ರಕಾರಕ್ಕೆ ಹೊಂದಿಕೊಂಡತೆ ಒಂದು ಸುಂದರ ಮೆಟ್ಟಿಲುಗಳ ಕಲ್ಯಾಣಿ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ವಾಸ್ತು ಶಿಲ್ಪ ನೋಡಲು ಬರೀ ರಾಜ್ಯವಲ್ಲದೇ ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

 

ನಂದಿ ಬೆಟ್ಟದ ಯೋಗನಂದೀಶ್ವರ: ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ದೇವಾಲಯದಲ್ಲಿ ಶಿವನು ಯೋಗ ದೀಕ್ಷೆಯಲ್ಲಿರುವುದರಿಂದ  ಉತ್ಸವಗಳು ನಡೆಯುವುದಿಲ್ಲ. ಗರ್ಭಗುಡಿ, ಸುಕನಾಸಿ, ನವರಂಗ ಮತ್ತು ಕಲ್ಯಾಣಮಂಟಪಗಳನ್ನು ಒಳಗೊಂಡ ಈ ದೇವಾಲಯ ಬಹಳ ಸುಂದರವಾಗಿದೆ. ಸುಕನಾಸಿಯ ಬಾಗಿಲುವಾಡದ ಹಿತ್ತಾಳೆಯ ಚೌಕಟ್ಟಿನಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದೆ. ದ್ವಾರದ ಎರಡು ಪಕ್ಕಗಳಲ್ಲೂ ಸುಮಾರು ಐದು ಅಡಿ ಎತ್ತರದ ಲೋಹದ ದ್ವಾರಪಾಲಕ ವಿಗ್ರಹಗಳಿವೆ. ಇವು ಕೃಷ್ಣದೇವರಾಯನ ಕಾಣಿಕೆ.

ನಮ್ಮ ಚಿಕ್ಕಬಳ್ಳಾಪುರ